ಉತ್ತರ ಅಟ್ಲಾಂಟಿಕ್ ಕೌಲು ಸಂಸ್ಥೆ: ಅಮೆರಿಕ ಸಂಯುಕ್ತ ಸಂಸ್ಥಾನ. ಕೆನಡ ಹಾಗೂ ಪಶ್ಚಿಮ ಐರೋಪ್ಯ ರಾಷ್ಟ್ರಗಳನೇಕವನ್ನೊಳಗೊಂಡ ಸಾಮೂಹಿಕ ರಕ್ಷಣಾ ವ್ಯವಸ್ಥೆ; ಅಂತಾರಾಷ್ಟ್ರೀಯ ಕೂಟ (ನಾರ್ತ್ ಅಟ್ಲಾಂಟಿಕ್ ಟ್ರೀಟಿ ಆರ್ಗನೈಸೇಷನ್ - ನ್ಯಾಟೊ). ಉತ್ತರ ಅಟ್ಲಾಂಟಿಕ್ ಸಾಗರದ ಆಚೀಚೆ ದಡಗಳಲ್ಲಿರುವ ರಾಷ್ಟ್ರಗಳು ಈ ಕೂಟಕ್ಕೆ ಸೇರಿರುವುದ ರಿಂದ ಇದಕ್ಕೆ ಈ ಹೆಸರು.

ಎರಡನೆಯ ಮಹಾಯುದ್ಧದ ಸಮಯದಲ್ಲಿ ಜರ್ಮನಿಯ ವಿರುದ್ಧ ಕಾದಾಡುತ್ತಿದ್ದ ಸೋವಿಯತ್ ಹಾಗೂ ಪಶ್ಚಿಮ ರಾಷ್ಟ್ರಗಳ ನಡುವೆ ಮೈತ್ರಿಯೇರ್ಪಟ್ಟಿತ್ತಾದರೂ ಅನಂತರದ ಕಾಲದಲ್ಲಿ ಇದು ಮುರಿದು ಬಿದ್ದ ಫಲವಾಗಿ ಪೂರ್ವ- ಪಶ್ಚಿಮ ರಾಷ್ಟ್ರಗಳ ನಡುವೆ ವಿರಸ ಬೆಳೆದದ್ದರಿಂದ ಪಶ್ಚಿಮದ ರಾಷ್ಟ್ರಗಳು ತಮ್ಮ ರಾಜನೀತಿಯನ್ನೂ ಯುದ್ಧತಂತ್ರವನ್ನೂ ಪುನರ್ವಿಮರ್ಶಿಸುವುದು ಅನಿವಾರ್ಯವಾಯಿತು. ವಿಶ್ವಸಂಸ್ಥೆಯ ಭದ್ರತಾಸಮಿತಿಯ ಕಲಾಪಗಳಲ್ಲಿ ಸೋವಿಯತ್ ರಾಜ್ಯ ಪದೇ ಪದೇ ನಿರಾಕರಣಾಧಿಕಾರ (ವೀಟೊ) ಚಲಾಯಿಸ ಲಾರಂಭಿಸಿದ್ದರಿಂದ ಈ ಬೃಹದ್ರಾಷ್ಟ್ರಗಳಲ್ಲಿ ಒಮ್ಮತ ಅಸಾಧ್ಯವೆನಿಸಿತು. ಈ ಸಂಸ್ಥೆಯಿಂದ ಶಾಂತಿಪಾಲನೆ ಸಾಧ್ಯವಿಲ್ಲವೆಂಬುದು ಸ್ಥಿರಪಟ್ಟಾಗ ಅಮೆರಿಕ ಸಂಯುಕ್ತಸಂಸ್ಥಾನ ಹಾಗೂ ಕೆನಡಗಳೂ ಬೆಲ್ಜಿಯಂ, ಡೆನ್ಮಾರ್ಕ್, ಫ್ರಾನ್ಸ್‌, ಐಸ್ಲೆಂಡ್, ಇಟಲಿ, ಲಕ್ಸಂಬರ್ಗ್, ನೆದರ್ಲೆಂಡ್ಸ್‌, ನಾರ್ವೆ, ಪೋರ್ಚುಗಲ್, ಸಂಯುಕ್ತ ರಾಜ್ಯ (ಬ್ರಿಟನ್)ಗಳೂ ಸೇರಿ 1949ರಲ್ಲಿ ಈ ಕೌಲಿಗೆ ಸಹಿಹಾಕಿದುವು. ಮುಂದೆ ಗ್ರೀಸ್, ತುರ್ಕಿಗಳಿಗೂ (1952) ಪಶ್ಚಿಮ ಜರ್ಮನಿಗೂ (1955) ಈ ವ್ಯವಸ್ಥೆಯ ಸದಸ್ಯತ್ವ ದೊರಕಿತು.

ಈ ವ್ಯವಸ್ಥೆ ಸ್ಥಾಪಿತವಾದಾಗ ಪ್ಯಾರಿಸಿನಲ್ಲಿ ಇದರ ಮುಖ್ಯ ಕಚೇರಿಯಿತ್ತು. ಸದಸ್ಯರಾಷ್ಟ್ರಗಳು ಕಳಿಸಿಕೊಟ್ಟ ಸೈನಿಕದಳಗಳನ್ನೆಲ್ಲ ಒಂದುಗೂಡಿಸಿ ಸಂಯುಕ್ತ ಭೂ ವಾಯು ಜಲ ಸೇನಾ ವ್ಯವಸ್ಥೆಯೊಂದನ್ನು ನಿರ್ಮಿಸಿ ಸತತ ಅಭ್ಯಾಸ ನಡೆಸಿ ಇದನ್ನು ದಕ್ಷ ರಕ್ಷಣಾ ಬಲವನ್ನಾಗಿ ಪರಿವರ್ತಿಸುವುದು ಈ ಸಂಸ್ಥೆಯ ಮುಖ್ಯೋದ್ದೇಶ. ಈ ಕೌಲಿನ ರಾಷ್ಟ್ರಗಳಲ್ಲಿ ಯಾವುದರ ಮೇಲೆ ಆಕ್ರಮಣ ನಡೆದರೂ ಅದು ಎಲ್ಲ ಸದಸ್ಯ ರಾಷ್ಟ್ರಗಳ ಮೇಲೂ ನಡೆದ ಆಕ್ರಮಣವೆಂದು ಪರಿಭಾವಿಸಿ ಇತರ ರಾಷ್ಟ್ರಗಳು ಆ ರಾಷ್ಟ್ರಕ್ಕೆ ಅಗತ್ಯವೆನಿಸಿದ ಎಲ್ಲ ನೆರವನ್ನೂ ನೀಡಬೇಕೆಂಬುದು ಈ ಕೌಲಿನ ವಿಧಿಗಳಲ್ಲೊಂದು.

1950ರಿಂದೀಚೆಗೆ ಈ ಸಂಸ್ಥೆಯಲ್ಲಿ ಆಂತರಿಕ ತಿಕ್ಕಾಟ ವ್ಯಕ್ತವಾಗಿದೆ. ಜರ್ಮನಿಯೂ ಈ ವ್ಯವಸ್ಥೆಯಲ್ಲಿ ಸೇರಿರುವುದರಿಂದ ಆ ದೇಶದ ಸೈನ್ಯಶಕ್ತಿ ಮತ್ತೆ ಅತಿಯಾಗಿ ಬೆಳೆದೀತೆಂಬ ಭಯ ಉದ್ಭವಿಸಿರುವುದೂ ಈ ಸಂಸ್ಥೆಯ ಎರಡು ಸದಸ್ಯ ರಾಷ್ಟ್ರಗಳಾದ ಗ್ರೀಸ್ ತುರ್ಕಿಗಳು ಸೈಪ್ರಸ್ಸಿನ ಮೇಲಣ ಸ್ವಾಮ್ಯಕ್ಕಾಗಿ ಪರಸ್ಪರವಾಗಿ ಬಡಿದಾಡುತ್ತಿರುವುದೂ ಫ್ರಾನ್ಸಿನ ಅಧ್ಯಕ್ಷರಾಗಿದ್ದ ಡಿಗಾಲೆ ಅಮೆರಿಕ ಸಂಯುಕ್ತ ಸಂಸ್ಥಾನ ಹಾಗೂ ಬ್ರಿಟನ್ನಿನ ಬಗ್ಗೆ ವೈರಭಾವ ತಳೆದದ್ದೂ ಈ ಸಂಸ್ಥೆಯ ದೌರ್ಬಲ್ಯಕ್ಕೆ ಕೆಲವು ಕಾರಣಗಳು.

ಫ್ರಾನ್ಸ್‌ ಕೂಡ ಈ ಸಂಸ್ಥೆಯನ್ನು ತ್ಯಜಿಸುವುದಾಗಿ ಆಗಿನ ಫ್ರೆಂಚ್ ಅಧ್ಯಕ್ಷ ಡಿಗಾಲೆ 1966ರಲ್ಲಿ ಸಾರಿದರು. ಈ ವ್ಯವಸ್ಥೆಗೆ ಸೇರಿದ ಎಲ್ಲ ವಿದೇಶೀ ಸೈನ್ಯಗಳೂ 1967ರೊಳಗೆ ಪ್ಯಾರಿಸ್ಸಿನಿಂದ ಹೊರ ಹೋಗಬೇಕಲ್ಲದೆ ಇದರ ಮುಖ್ಯ ಕಚೇರಿಯನ್ನು ಇಲ್ಲಿಂದ ವರ್ಗಾಯಿಸ ಬೇಕೆಂದು ಅವರು ಹೇಳಿದ್ದರಿಂದ ಇದರ ಕಾರ್ಯಾಲಯವೀಗ ಬ್ರಸಲ್ಸ್‌ (ಬೆಲ್ಜಿಯಂ) ನಲ್ಲಿದೆ.	

ವರ್ಗ: ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ